ಕರ್ನಾಟಕಬೆಂಗಳೂರು

ಜನರ ಉಸಿರುಗಟ್ಟಿಸುತ್ತಿದೆ ಫೇಸ್‌ಲೆಸ್ ವ್ಯವಸ್ಥೆ

ಕೈಕೊಟ್ಟ ಸಾರಿಗೆ ಇಲಾಖೆಯ ಆನ್‌ಲೈನ್ ಯೋಜನೆ

ಅಧ್ಯಯನ ನಡೆಸದೆ ಏಕಾಏಕಿ ನಿರ್ಧಾರದ ಎಡವಟ್ಟು


ಬೆಂಗಳೂರು: ಕಲಿಕಾ ಚಾಲನಾ ಪರವಾನಗಿ (ಎಲ್‌ಎಲ್), ವಾಹನ ನೋಂದಣಿ, ಆರ್‌ಸಿ ಕಾರ್ಡ್ ನವೀಕರಣ ಸೇರಿದಂತೆ ಪ್ರಾದೇಶಿಕ ಸಾರಿಗೆ ಕಚೇರಿಯ (ಆರ್‌ಟಿಒ) 20ಕ್ಕೂ ಅಧಿಕ ಸೇವೆಗಳು ಆನ್‌ಲೈನ್‌ನಲ್ಲೇ ಸಿಗುವ ಫೇಸ್ ಲೆಸ್ ವ್ಯವಸ್ಥೆಯನ್ನು ಸಾರಿಗೆ ಇಲಾಖೆ ನ.1ರಿಂದ ಪ್ರಾಯೋಗಿಕವಾಗಿ ಜಾರಿಗೆ ತಂದಿದೆ. ಆದರೆ, ಈ ಹೊಸ ವ್ಯವಸ್ಥೆ ಸಾರ್ವಜನಿಕರಿಗೆ ಉಸಿರುಗಟ್ಟಿಸುವ ವಾತಾವರಣ ಸೃಷ್ಟಿಸಿದೆ. ಡಿಜಿಟಲೀಕರಣಕ್ಕೆ ತಕ್ಕಂತೆ ವ್ಯವಸ್ಥೆ ಮೇಲ್ದರ್ಜೆಗೇರಿಸದೆ ಹಾಗೂ ಯೋಜನೆ ಜಾರಿಗೂ ಮುನ್ನ ಅಧ್ಯಯನ ನಡೆಸದೆ ಅನುಷ್ಠಾನ ತಂದಿರುವುದೇ ಎಡವಟ್ಟಿಗೆ ಕಾರಣ ಎಂದು ಹೇಳಲಾಗುತ್ತಿದೆ.
ಈವರೆಗೆ ಮೋಟಾರು ವಾಹನ ನಿಯಮ 33ರ ಪ್ರಕಾರ ಹೊಸ ವಾಹನ ಖರೀದಿಸಿದಾಗ ರಿಜಿಸ್ಟ್ರೇಷನ್ ಜವಾಬ್ದಾರಿ ಆಯಾ ಆರ್‌ಟಿಒಗಳಿಗೆ ಇತ್ತು. ಆದರೀಗ ಕಾಯ್ದೆ ತಿದ್ದುಪಡಿ ಮಾಡಿ ವಾಹನ ರಿಜಿಸ್ಟ್ರೇಷನ್ ಶೋರೂಂನಲ್ಲೇ ನಡೆಯಲಿದ್ದು, ಡೀಲರ್‌ಗಳಿಗೆ ಜವಾಬ್ದಾರಿ ಕೊಡಲಾಗಿದೆ. ರಾಜ್ಯದಲ್ಲಿ 1800 ವಾಹನ ಡೀಲರ್‌ಶಿಪ್ ಗಳಿದ್ದು, ಶೋರೂಂನಲ್ಲೇ ನೋಂದಣಿಯಾಗುವುದರಿಂದ ಆರ್‌ಟಿಒ ನೆಪಮಾತ್ರಕ್ಕೆ ಇರಲಿದ್ದಾರೆ. ಇದರ ಬಗ್ಗೆಯೂ ಅಪಸ್ವರ ವ್ಯಕ್ತವಾಗಿದ್ದು, ಶೋರೂಂಗೆ ಡೀಲರ್‌ಶಿಫ್ ಕೊಟ್ಟಿರುವುದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಕೆಯಾಗಿದ್ದು, ವಿಚಾರಣೆ ಪ್ರಗತಿಯಲ್ಲಿದೆ.

ಫೇಸ್‌ಲೆಸ್ ವ್ಯವಸ್ಥೆಯಿಂದ ಸಮಸ್ಯೆಯಾಗಿರುವ ಬಗ್ಗೆ ಸಾರ್ವಜನಿಕರು, ಮುಖ್ಯ ಕಾರ್ಯದರ್ಶಿಗೆ ಕೊಟ್ಟಿರುವ ದೂರು.

ಎಲ್‌ಎಲ್‌ಗೆ ಗಡ್ಡದ ಸಮಸ್ಯೆ!
ಈವರೆಗೆ ಎಲ್‌ಲ್ ಮಾಡಿಸಿಕೊಳ್ಳಲು ಆರ್‌ಟಿಒ ಕಚೇರಿಗೆ ಹೋಗಿ ಅಲ್ಲೇ ಪರೀಕ್ಷೆ ಬರೆಯಬೇಕಿತ್ತು. ಆದರೆ, ಆನ್‌ಲೈನ್ ವ್ಯವಸ್ಥೆ ಜಾರಿಯಿಂದ ಮನೆಯಲ್ಲಿ ಕುಳಿತೇ ಅರ್ಜಿ ಸಲ್ಲಿಸಿ, ಅಲ್ಲೇ ಪರೀಕ್ಷೆ ಬರೆದು ಎಲ್‌ಎಲ್ ಪಡೆಯಬಹುದು. ಆದರೆ, ಆನ್‌ಲೈನ್‌ನಲ್ಲಿ ಎಲ್‌ಎಲ್ ಪಡೆಯುವ ವ್ಯವಸ್ಥೆ ಅನುಕೂಲಕ್ಕಿಂತ ಅನಾನುಕೂಲವೇ ಜಾಸ್ತಿಯಾಗಿದೆ. ಎಲ್‌ಎಲ್ ಸಂದರ್ಭದಲ್ಲಿ ವೆಬ್‌ಕ್ಯಾಮರಾ ಮೂಲಕವೇ ಫೋಟೋ ತೆಗೆದುಕೊಳ್ಳಲಾಗುತ್ತದೆ. ಆದರೆ, ಡಿಎಲ್‌ಗೆ ಕಚೇರಿಗೆ ಬಂದಾಗ ಎಲ್‌ಎಲ್ ವೇಳೆ ತೆಗೆದ ಫೋಟೋಗೂ ಡಿಎಲ್ ವೇಳೆ ಕಚೇರಿಯಲ್ಲಿ ತೆಗೆಯುವ ಫೋಟೋಗೂ ಸಾಮ್ಯತೆ ಇಲ್ಲದೆ ಸಮಸ್ಯೆಯಾಗುತ್ತಿದೆ.
ಎಲ್‌ಎಲ್ ವೇಳೆ ತೆಗೆದ ಫೋಟೋದಲ್ಲಿ ಹೇಗಿದ್ದರೋ ಅದೇ ರೀತಿ ಇದ್ದರಷ್ಟೇ ಡಿಎಲ್ ವೇಳೆ ತೆಗೆದ ಫೋಟೋವನ್ನು ಸಿಸ್ಟಂ ಸ್ವೀಕರಿಸುತ್ತದೆ. ಒಂದು ವೇಳೆ ಆಗ ತಲೆಕೂದಲು, ಗಡ್ಡ ಬಿಟ್ಟುಕೊಂಡು ಫೋಟೋ ತೆಗೆಸಿ ಈಗ ಶೇವ್ ಹಾಗೂ ಕಟಿಂಗ್ ಮಾಡಿಸಿಕೊಂಡು ಬಂದರೆ ಫೋಟೋ ಸ್ವೀಕರಿಸುವುದಿಲ್ಲ. ಮೂಗುನತ್ತು, ಕಿವಿ ಓಲೆ ಹೀಗೆ ಎಲ್‌ಎಲ್ ವೇಳೆ ಮುಖದಲ್ಲಿ ಏನೆಲ್ಲ ಇತ್ತೋ ಅದೆಲ್ಲವೂ ಹಾಗೇ ಇರಬೇಕು ಸ್ವಲ್ಪ ಬದಲಾವಣೆಯಾದರೂ ಸಮಸ್ಯೆಯಾಗುತ್ತಿದೆ. ಬಹುತೇಕ ಪ್ರಕರಣಗಳಲ್ಲಿ ಇದೇ ತೊಂದರೆಯಾಗುತ್ತಿದೆ ಎಂದು ಅಧಿಕಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಅರ್ಜಿಗಳ ತಿರಸ್ಕೃತ ಜಾಸ್ತಿಯಾಗುತ್ತೆ!
ಸಮರ್ಪಕ ವ್ಯವಸ್ಥೆ ಮಾಡದ ಹಿನ್ನೆಲೆಯಲ್ಲಿ ಆನ್‌ಲೈನ್‌ನಲ್ಲಿ ಅರ್ಜಿಗಳು ಸಲ್ಲಿಕೆಯಾದರೂ ಸಹ ಆರ್‌ಟಿಒ ಮಟ್ಟದಲ್ಲಿ ತಿರಸ್ಕೃತಗೊಳ್ಳುವ ಸಂಖ್ಯೆ ಹೆಚ್ಚಿದೆ. ನೇರ ಭೇಟಿ ಸಂದರ್ಭದಲ್ಲೇ ಸರಿಯಾದ ದಾಖಲಾತಿ ಸಲ್ಲಿಸದ ಕಾರಣಕ್ಕೆ ಹಲವು ಅರ್ಜಿಗಳು ತಿರಸ್ಕೃತಗೊಳ್ಳುತ್ತಿದ್ದವು. ಅಧಿಕಾರಿಗಳು ಹೇಳಿದರೂ ಸೂಕ್ತವಾಗಿ ಅರ್ಜಿ ಸಲ್ಲಿಸುತ್ತಿರಲಿಲ್ಲ. ಈಗ ಆನ್‌ಲೈನ್ ಸೇವೆ ಒದಗಿಸಿರುವುದರಿಂದ ತಿರಸ್ಕೃತಗೊಳ್ಳುವ ಅರ್ಜಿಗಳ ಸಂಖ್ಯೆ ಹೆಚ್ಚಾಗಿದೆ ಎಂದು ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Paper RC CARD

ಪೇಪರ್ ಆರ್‌ಸಿಗೂ 200 ರೂ. ವಸೂಲಿ!
ವಾಹನ ನೋಂದಣಿಗೆ ಆರ್‌ಸಿ ಸ್ಮಾರ್ಟ್‌ಕಾರ್ಡ್ ವಿತರಿಸುವ ವ್ಯವಸ್ಥೆಯನ್ನು ರದ್ದುಗೊಳಿಸಿ ಕಾಗದದ ರೂಪದಲ್ಲಿ ಕಲರ್ ಜೆರಾಕ್ಸ್ ಪ್ರತಿ ಕೊಡಲಾಗುತ್ತಿದೆ. ಆದರೆ, ಐದಾರು ರೂಪಾಯಿಯ ಕಲರ್ ಜೆರಾಕ್ಸ್‌ಗೂ ವಾಹನ ಮಾಲೀಕರಿಂದ 200 ರೂ. ವಸೂಲಿ ಮಾಡುತ್ತಿದೆ.
ಫೇಸ್‌ಲೆಸ್ ವ್ಯವಸ್ಥೆ ಜಾರಿಗೂ ಮೊದಲು ಆರ್‌ಸಿ ಸ್ಮಾರ್ಟ್‌ಕಾರ್ಡ್ ನೀಡಲಾಗುತ್ತಿತ್ತು. ಶುಲ್ಕದ ರೂಪದಲ್ಲಿ ಪ್ರತಿ ವಾಹನ ನೋಂದಣಿಗೆ 211 ರೂ. ಪಾವತಿಸಿಕೊಂಡು, ಸ್ಮಾರ್ಟ್ ಕಾರ್ಡ್ ಕೊಡಲಾಗುತ್ತಿತ್ತು. 211 ರೂ.ನಲ್ಲಿ 137 ರೂ. ಸರ್ಕಾರಕ್ಕೆ ಹಾಗೂ 74 ರೂ. ಕಾರ್ಡ್ ಪೂರೈಕೆ ಕಂಪನಿಗೆ ಹೋಗುತ್ತಿತ್ತು.ಆದರೆ, ನ.1ರಿಂದ ಸ್ಮಾರ್ಟ್‌ಕಾರ್ಡ್ ಬದಲು ಕಾಗದದ ಮೇಲೆ ಕಲರ್ ಜೆರಾಕ್ಸ್ ಪ್ರತಿ ನೀಡುವ ವ್ಯವಸ್ಥೆ ಜಾರಿಯಾಗಿದೆ. ನೋಂದಣಿ ಶುಲ್ಕವನ್ನು ಈಗ 200 ರೂ.ಗೆ ಇಳಿಸಲಾಗಿದೆ. ವಾಹನ ಮಾಲೀಕ ಪಾವತಿಸುವ ಪೂರ್ಣ ಮೊತ್ತ ಸರ್ಕಾರಕ್ಕೆ ಹೋಗುತ್ತೆ. ಆದರೆ, ಭದ್ರತೆ ದೃಷ್ಟಿಯಿಂದ ಹಾಗೂ ಇಟ್ಟುಕೊಳ್ಳಲು ಸ್ಮಾರ್ಟ್‌ಕಾರ್ಡ್ ಉಪಯುಕ್ತವಾಗುತ್ತಿತ್ತು. ಆದರೀಗ, ಕಾಗದ ಕೊಟ್ಟರೂ ಸಹ 200 ರೂ. ಶುಲ್ಕ ಪಡೆಯುತ್ತಿರುವುದು ಸರಿಯಲ್ಲ ಎಂಬುದು ಜನರ ಅಸಮಾಧಾನ.

ಹೈಪೋಥಿಕೇಷನ್‌ಗೂ ಶುಲ್ಕ
ಈ ಮೊದಲು ವಾಹನ ನೋಂದಣಿಗೆ ಮಾತ್ರವೇ ಶುಲ್ಕ ಪಾವತಿ ಮಾಡಬೇಕಿತ್ತು. ಆದರೀಗ ಬ್ಯಾಂಕ್ ಸಾಲದ ಹೈಪೋಥಿಕೇಷನ್ ಎಂಟ್ರಿ ಹಾಗೂ ಕ್ಯಾನ್ಸಲ್ ಎರಡಕ್ಕೂ ತಲಾ 200 ರೂ.ನಂತೆ 400 ರೂ. ಪಾವತಿ ಮಾಡಬೇಕು. ಹೈಪೋಥಿಕೇಷನ್ ಕ್ಯಾನ್ಸ್‌ಲ್ ಮಾಡಿದ ಸಂದರ್ಭದಲ್ಲಿ ಸ್ಮಾರ್ಟ್‌ಕಾರ್ಡ್ ಅನ್ನು ಆರ್‌ಟಿಒ ಕಚೇರಿಯಲ್ಲೇ ಸರೆಂಡರ್ ಮಾಡಿಕೊಂಡು ಹೊಸ ವ್ಯವಸ್ಥೆಯ ಪ್ರಕಾರ ಕಾಗದದ ಆರ್‌ಸಿ ವಿತರಣೆ ಮಾಡಲಾಗುತ್ತದೆ.

ಬಾರ್ ಕೋಡ್‌ನಿಂದ ಪ್ರಯೋಜನವಿಲ್ಲ
ಕಲರ್ ಜೆರಾಕ್ಸ್‌ನಲ್ಲಿ ಆರ್‌ಸಿ ಕೊಟ್ಟರೂ ಬಾರ್ ಕೋಡ್ ಹಾಕಿರುವುದರಿಂದ ನಕಲು ಮಾಡಲಾಗಲ್ಲ ಎಂಬುದು ಸಾರಿಗೆ ಅಧಿಕಾರಿಗಳ ವಾದ. ಆದರೆ, ಬಾರ್ ಕೋಡ್‌ನಿಂದ ಯಾವುದೇ ಪ್ರಯೋಜನ ಇಲ್ಲ. ಬಾರ್ ಕೋಡ್ ದಲು ಕೊನೇ ಪಕ್ಷ ಹಾಲೋಗ್ರಾಂ ಸ್ಟಿಕ್ಕರ್ ವ್ಯವಸ್ಥೆಯಾದರೂ ಮಾಡಿದರೆ ಸೂಕ್ತ ಎಂಬುದು ಆರ್‌ಟಿಒ ಅಧಿಕಾರಿಗಳ ವಾದ.

ಪೇಪರ್ ಆರ್‌ಸಿಗೆ ಹಲವು ಸಮಸ್ಯೆ

  • ಕಾಗದವಾಗಿರುವುದರಿಂದ ಸುಲಭವಾಗಿ ವಾಹನದ ಮಾಹಿತಿ ನಕಲು ಮಾಡಬಹುದು
  • ಜೋಪಾನ ಮಾಡಲು ಆಗಲ್ಲ. ಸ್ವಲ್ಪ ಎಚ್ಚರ ತಪ್ಪಿದ್ದರೂ ಹರಿದು ಹೋಗುತ್ತದೆಂಬ ಭಯ
  • ಸರ್ಕಾರದ ಖಜಾನೆಗೆ ಹಣ ಹೋದರೂ ಸಹ ವಾಹನ ಮಾಲೀಕರ ಜೇಬು ಸುಡಲಿದೆ..

Leave a Reply

Your email address will not be published.

Back to top button